ನಾಯಿತುಳಸಿ
ಲೇಬಿಯೇಟಿ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ (ಹೋರಿಬೇಸಿಲ್). ಇದರ ವೈಜ್ಞಾನಿಕ ಹೆಸರು ಆಸಿಮಮ್ ಅಮೆರಿಕಾನಮ್ ಇದು 30-60 ಸೆಂಮೀ ಎತ್ತರಕ್ಕೆ ನೀಳವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಇದನ್ನು ಹೊಲಗದ್ದೆಗಳಲ್ಲೂ ಪಾಳುಭೂಮಿಗಳಲ್ಲೂ ಕಾಣಬಹುದು. ಕೆಲವೆಡೆಗಳಲ್ಲಿ ಇದನ್ನು ಔಷಧಿಯ ಸಸ್ಯವಾಗಿ ಬೆಳೆಸುವುದಿದೆ. ಇದಕ್ಕೆ ಯಾವ ತರಹ ಮಣ್ಣಿನಲ್ಲಾದರೂ ಬೆಳೆಯುವ ಸಾಮಥ್ರ್ಯ ಉಂಟು. ಇದರ ಎಲೆಗಳು ಸರಳ, ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳ ಬಣ್ಣ ನಸುಗೆಂಪು, ಬಿಳಿ ಅಥವಾ ಊದಾ. ದಳಗಳು ಇರ್ತುಟಿಯಾಕಾರದವು. ಕೇಸರಗಳು ನಾಲ್ಕು. ಎರಡು ಕೇಸರಗಳು ಉಳಿದೆರಡಕ್ಕಿಂತ ಚಿಕ್ಕವು. ಫಲ ನಟ್‍ಲೆಟ್ಸ್ ಎಂಬ ಬಗೆಯದು.

	ನಾಯಿತುಳಸಿ ಹಲವಾರು ಬಗೆಯಲ್ಲಿ ಉಪಯುಕ್ತ. ಇದರಿಂದ ಪಡೆಯಲಾಗುವ ಚಂಚಲ ತೈಲವನ್ನು ಸಾಬೂನು ಹಾಗೂ ಸುಗಂಧ ದ್ರವ್ಯಗಳಿಗೆ ವಾಸನೆ ಕಟ್ಟಲು ಬಳಸುವುದಿದೆ. ಬೇರೆ ಬೇರೆ ಭೌಗೋಳಿಕ ವಲಯಗಳಲ್ಲಿ ಬೆಳೆಯುವ ಗಿಡಗಳಿಂದ ಬರುವ ಎಣ್ಣೆಯ ರಾಸಾಯನಿಕ ಸಂಯೋಜನೆ ಹಾಗೂ ಗುಣಗಳಲ್ಲಿ ವ್ಯತ್ಯಾಸವಿದೆ. ಮೀಥೈಲ್ ಸಿನಮೇಟ್ ಮುಖ್ಯಾಂಶವಾಗಿರುವ ಒಂದು ಬಗೆಯ ತೈಲ, ಕರ್ಪೂರವಿರುವ ಇನ್ನೊಂದು ಬಗೆಯ ತೈಲ ಮತ್ತು ಸಿಟ್ರಾಲ್ ಇರುವ ಮತ್ತೊಂದು ಬಗೆಯ ತೈಲ- ಹೀಗೆ ಮೂರು ತೆರನ ತೈಲಗಳನ್ನು ಗುರುತಿಸಬಹುದು. ಗಿಡಗಳು ಬೆಳೆಯುವ ವಿವಿಧ ಮಣ್ಣುಗಳು ಹಾಗೂ ಹವಾಪರಿಸ್ಥಿತಿಗಳು ಇದಕ್ಕೆ ಕಾರಣವೊ ಇಲ್ಲವೆ ಗಿಡಗಳ ತಳಿಗಳ ವಿಭಿನ್ನತೆ ಕಾರಣವೋ ಹೇಳಲುಬಾರದು. ಕರ್ಪೂರದ ಅಂಶ ಅಧಿಕವಾಗಿರುವ ತೈಲ ಇರುವ ಗಿಡವನ್ನು ಕಾಮರೋದ್ವೀಪಗಳು, ಕೀನ್ಯ, ರಷ್ಯ, ಅಮೇರಿಕ ಸಂಯುಕ್ತಸಂಸ್ಥಾನ ಮುಂತಾದೆಡೆ ಬೆಳೆಸಿ ಹೆಕ್ಟೇರಿಗೆ 20-100 ಕೆಜಿ ಕರ್ಪೂರವನ್ನು ಪಡೆಯುವ ಯತ್ನಗಳು ಸಾಗಿವೆ.

	ಭಾರತದಲ್ಲಿ ಇಡೀ ಗಿಡವನ್ನು ಆವಿ ಆಸವೀಕರಣಕ್ಕೆ ಒಳಪಡಿಸಿ ಲಿಂಬೆ ಹಾಗೂ ಲ್ಯಾವೆಂಡರ್ ವಾಸನೆಯಿರುವ ತೈಲವನ್ನೂ (ಉತ್ತರಭಾರತದ ಗಿಡಗಳಿಂದ) ಕೊಂಚ ಕರ್ಪೂರದ ಗಂಧ ಇರುವ ತೈಲವನ್ನೂ (ದಕ್ಷಿಣ ಭಾರತದ ಗಿಡಗಳಿಂದ) ಪಡೆಯಲಾಗಿದೆ. ಎರಡರ ಬಣ್ಣವೂ ತಿಳಿಹಳದಿ. ಎರಡರಲ್ಲೂ ಮುಖ್ಯವಾಗಿ ಸಿಟ್ರಾಲ್, ಲಿನಲೂಲ್, ಸಿಟ್ರನೆಲಾಲ್, ಜಿರ್ಯಾನಿಯಾಲ್, ಮೀಥೈಲ್ ಸಿನಮೇಟ್ ಮುಂತಾದ ರಾಸಾಯನಿಕಗಳೂ ಕೊಂಚಮೊತ್ತದಲ್ಲಿ ಯೂಜೆನಾಲ್, ಸಿಟ್ರನೆಲಿಕ್ ಆಮ್ಲಗಳೂ ಇವೆ. ನಾಯಿತುಳಸಿಯ ಬೀಜಗಳಿಂದಲೂ ಒಂದು ತೆರನ ತೈಲವನ್ನು ಪಡೆಯಬಹುದು.

	ನಾಯಿತುಳಸಿಯನ್ನು ಅಡುಗೆ ಸೊಪ್ಪಾಗಿ ಉಪಯೋಗಿಸುವುದಿದೆ. ಇದನ್ನು ಕೋಸಂಬರಿ, ಸಾರು ಮುಂತಾದ ಅಡುಗೆ ಪದಾರ್ಥಗಳಿಗೆ ವಾಸನೆ ಕಟ್ಟಲು ಬಳಸುವುದುಂಟು. ಬೀಜಗಳಿಗೆ ಮೂತ್ರಕ ಹಾಗೂ ಶಕ್ತಿವರ್ಧಕ ಗುಣಗಳಿವೆ. ತಂಪು ಪಾನೀಯಗಳ ತಯಾರಿಕೆಯಲ್ಲಿ ಇವನ್ನು ಉಪಯೋಗಿಸಲಾಗುತ್ತದೆ. ಗಿಡಕ್ಕೆ ವಾತಹರ ಸ್ವೇಧವರ್ಧಕ ಮತ್ತು ಉತ್ತೇಜಕ ಗುಣಗಳುಂಟು.  ಗಿಡದ ಕಷಾಯವನ್ನು ಕೆಮ್ಮಿನ ನಿವಾರಣೆಗೂ ಎಲೆಗಳ ಕಷಾಯವನ್ನು ಆಮಶಂಕೆಯ ಚಿಕಿತ್ಸೆಗೂ ಬಳಸುವುದಿದೆ. ಎಲೆಗಳ ರಸವನ್ನು ಮಕ್ಕಳ ಶೀತ ಪಂಗುಸಿರ್ನಾಳುರಿತಗಳ (ಬ್ರಾಂಕ್ಯೆಟಿಸ್) ಚಿಕಿತ್ಸೆಗೆ ಕೊಡುವುದುಂಟು. ಈಥರ್ ಬಳಸಿ ಪಡೆಯಲಾಗುವ ಇದರ ಸಾರಕ್ಕೆ ಹಲವಾರು ತೆರನ ಬಾಕ್ಟೀರಿಯಾಗಳನ್ನು (ಮೈಕ್ರೊಕಾಕಸ್, ಪಚಿiÉೂಜನೀಸ್, ಎಷರೇಕಿಯಾ ಕೋಲೈ, ಮೈಕೊಬ್ಯಾಕ್ಟೀರಿಯಾ, ಕ್ಷಯವಿಷಾಣು) ನಿರೋಧಿಸುವ ಗುಣ ಇದೆ ಎನ್ನಲಾಗಿದೆ.
(ಎಚ್.ಕೆ.ಎಸ್‍ಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ